dinesh_maneer_Kondadakuli_blog2016-1182

ಸುಮಾರು ಐವತ್ತು ವರ್ಷಗಳ ಹಿಂದೆ ಒಬ್ಬ  ಹುಡುಗ ಮತ್ತೆ ಆತನ ಮನಸ್ಸಿನಾಳದ  ಕನಸು  ಶುರು ಆದದ್ದು ಹೀಗಂತೆ ;  ಹಿಂದಿನ ದಿನ ರಾತ್ರಿ ತಾನು ಕಂಡ ಆಟದ (ಯಕ್ಷಗಾನದ) ಗುಂಗಿನಿಂದ  ಹೊರಬರಲಾಗದೆ  ಸಮಯ ಸಿಕ್ಕಾಗಲೆಲ್ಲ ಮನೆಯಿಂದ ದೂರದ ಗುಡ್ಡೆ ಬದಿಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಕುಣಿಯುವವನು  ಈ  ಹುಡುಗ ; ಶಂಭು ,ಚಿಟ್ಟಾಣಿ , ಜಲವಳ್ಳಿ ಅಥವಾ ಮಹಾಬಲ ಹೆಗಡೆಯವರು  ಮಾಡಿದ ಪಾತ್ರಗಳ  ಅನುಕರಣೆ ಮಾಡುತ್ತಾ   ಗುಟ್ಟಿನಲ್ಲಿ ಕುಣಿಯುವ  ಈ ಹುಡುಗ ಒಂದು ದಿನ ಗುಡ್ಡೆ ಬದಿ ಅಡ್ಡಾಡಲು ಬಂದ ತನ್ನ  ಅಜ್ಜನ ಕಣ್ಣಿಗೆ ಬೀಳುತ್ತಾನೆ .  ಮೊಮ್ಮಗ ಮನೆಗೆ ಮರಳುವುದನ್ನೇ ಕಾಯುವ ಅಜ್ಜ,ಮೊಮ್ಮಗನಲ್ಲಿ ಯಕ್ಷಗಾನ ಕಲಿಯುವೆಯ ಕೇಳುತ್ತಾನೆ . ಖುಷಿಯಲ್ಲಿ ಮೊಮ್ಮಗ ಹೌದೆನ್ನುತ್ತಾನೆ . ಅಂದಿನಿಂದ ಮನೆಯಲ್ಲೇ ಯಕ್ಷಗಾನ ತರಗತಿ ಶುರು ಮೊಮ್ಮಗನಿಗೆ . ಊರಿನ ಆಸುಪಾಸಲ್ಲಿ  ನಡೆಯುವ ಯಕ್ಷಗಾನ ಪ್ರದರ್ಶನಗಳನ್ನು ಬಿಡದೆ ಇಡಿರಾತ್ರಿ  ನೋಡುತ್ತಾ ಎಲ್ಲ ಪೌರಾಣಿಕ ಪ್ರಸಂಗಗಳ ಹಾಡು ಬಾಯಿಪಾಟ ಮಾಡುಕೊಂಡು ಚಂಡೆ ಪೆಟ್ಟಿಗೆ ಸರಿಯಾಗಿ ಹೆಜ್ಜೆ ಹಾಕುತ್ತಿದ್ದ ಹುಡುಗನಿಗೆ ಅಜ್ಜನಿಂದ ಯಕ್ಷಗಾನದ  ಶಾಸ್ತ್ರೋಕ್ತ ಅಭ್ಯಾಸ . ಪ್ರಸಕ್ತ ಬಡಗು ತಿಟ್ಟು ಯಕ್ಷಗಾನ ಲೋಕದಲ್ಲಿ ಅಗ್ರಪಂಕ್ತಿಯ ಕಲಾವಿದ  ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಯಕ್ಷಗಾನದ ಜೊತೆಗಿನ ಸಖ್ಯ ಆರಂಭವಾದ ಕಾಲದ ಘಟನೆ ಇದು. ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಅಜ್ಜ ರಾಮ ಹೆಗಡೆ ಅವರ ಕಾಲದಲ್ಲಿ ಪ್ರಸಿದ್ಧ  ಕಲಾವಿದರಾಗಿದ್ದವರು .  ಮನೆಯವರಿಗೆ ಯಾರಿಗೂ ಅರಿವಿಲ್ಲದಂತೆ ಯಕ್ಷಗಾನದ  ತೀವ್ರವಾದ ಗೀಳು ಹಚ್ಚಿಕೊಂಡ ಮೊಮ್ಮಗ ಅಜ್ಜನಿಂದ    ತಾಳ ಕುಣಿತಗಳ ಪಾಠ ಕಲಿತು ಮೇಳವನ್ನು ಸೇರುತ್ತಾನೆ .

dinesh_maneer_Kondadakuli_blog2016-2914

ಯಕ್ಷಗಾನ ವ್ಯವಸಾಯಿ ಮೇಳಕ್ಕೆ  ಕಾಲಿಡುವ ಮೊದಲೇ ಪೌರಾಣಿಕ ಪ್ರಸಂಗಗಳ ನಡೆ, ತಾಳಗಳ ಬಾಯಿಪಾಟ ಇದ್ದವರು ಕೊಂಡದಕುಳಿ ರಾಮಚಂದ್ರ ಹೆಗಡೆಯವರು. ಮೇಳವನ್ನು ಸೇರಿದ ಆರಂಭದ ದಿನಗಳಲ್ಲಿ  ಒಂದು ರಾತ್ರಿಯಲ್ಲಿ ಎರಡು ಮೂರು ಪಾತ್ರಗಳನ್ನೂ ಮಾಡುತ್ತಿದ್ದುದೂ  ಇದೆ. ಅಂದು ಯಾವ ಕಲಾವಿದರು ಬಂದಿಲ್ಲವೋ ಆ ಪಾತ್ರಗಳು ಕೊಂಡದಕುಳಿಯವರ  ಪಾಲಿಗೆ. ತನ್ನ ಪಾಲಿಗೆಬಂದ  ಯಾವ ಪಾತ್ರಗಳನ್ನು ಬೇಡವೆನ್ನದೆ  ಸ್ವೀಕರಿಸುತ್ತಿದ್ದವರು . ತನ್ನ ಪಾತ್ರ ಮುಗಿದ ತಕ್ಷಣ ನಿದ್ದೆ  ಮಾಡದೆ  ,  ವೇಷ ಕಳಚಿಟ್ಟು ರಂಗಸ್ಥಳದಬದಿಯಲ್ಲಿ  ಕೆಳಗೆ ಇಲೆಕ್ಟ್ರಿಶಿಯನ್ ಕುರ್ಚಿಯ ಪಕ್ಕದಲ್ಲಿ ಕುಳಿತು ಪೂರ್ತಿ ರಾತ್ರಿಯ ಆಟ ನೋಡುತ್ತಿದ್ದರು .   ಯಕ್ಷಗಾನವನ್ನು ಹೃದಯ ಪೂರ್ತಿ ತುಂಬಿಕೊಂಡು ವ್ಯವಸಾಯ ಮೇಳಕ್ಕೆ ಕಾಲಿಟ್ಟ   ಕೊಂಡದಕುಳಿಯವರು ತನ್ನನ್ನು ವಿಮರ್ಶಿಸುತ್ತಾ ಹಿರಿಯ ಕಲಾವಿದರಿಂದ ಕಲಿಯುತ್ತ ಮಹಾಭಾರತ ರಾಮಾಯಣ ಭಾಗವತಗಳನ್ನು ಅಧ್ಯಯನ ಮಾಡುತ್ತಾ    ದಿನ ದಿನವೂ ಬೆಳೆದು  ಇಂದು ಪರಿಪೂರ್ಣ ಕಲಾವಿದರು  . ಕೊಂಡದಕುಳಿಯವರ ಕಲ್ಪನೆಯ ಪರಿಪೂರ್ಣತೆಯಲ್ಲಿ ರಂಗಸ್ಥಳದ ಮೇಲಿನ ಪ್ರದರ್ಶನಕ್ಕೆ ಮಾತ್ರವಲ್ಲದೆ ಚೌಕಿಯ ಹೊರಗಿನ ಶಿಸ್ತು ಸಮಯಪ್ರಜ್ಞೆ ಗಳಿಗೂ ಮುಖ್ಯ ಸ್ಥಾನ ಇದೆ  . ಒಬ್ಬ ಕಲಾವಿದನ ಕಲಿಕೆ ಬೆಳವಣಿಗೆ ಮತ್ತೆ  ರಂಗದಲ್ಲಿ  ಉಳಿವಿಗೆ ಅರ್ಹತೆಯ ಜೊತೆಗೆ ಶಿಸ್ತು ಶ್ರದ್ಧೆ ಗಳೂ ಕೂಡ ಕಾರಣ ಎಂದು ಹೇಳುತ್ತಾ ಮತ್ತೆ ತಾವು ಹೇಳಿದ್ದನ್ನು ತಮ್ಮ ಬದುಕಿನಲ್ಲಿ ಪಾಲಿಸುತ್ತಾ ಬಂದ ಅಪೂರ್ವ ಕಲಾವಿದರಿವರು. ಇವರನ್ನು ಅತಿಥಿ ಕಲಾವಿದರಾಗಿ ಕರೆಸಿದಾಗ  ಕಾರ್ಯಕ್ರಮದ ಪ್ರಾಯೋಜಕರಿಗಿಂತ ಮೊದಲೇ  ಸ್ಥಳದಲ್ಲಿ ಇವರು ಹಾಜಾರಾಗುವ ಸಂದರ್ಭಗಳೇ  ಹೆಚ್ಚು  ಸಂಭವಾನೆ ನೀಡಿ ಕರೆಸುವವರಿಗೂ    ಮತ್ತೆ ಹಣ ಕೊಟ್ಟು ನೋಡಬಂದ  ಪ್ರೇಕ್ಷಕರಿಗೂ ಸಂತ್ರಪ್ತಿಯನ್ನು ಉಣಬಡಿಸುವವರು; ಅನನುಭವಿ ಅಥವಾ ಎಳೆಯ ಕಲಾವಿದರು ರಂಗದಲ್ಲಿ ಎದುರಾದರೆ ಅವರನ್ನು ಪ್ರೋತ್ಸಾಹಿಸುತ್ತ ಮುಂದುವರಿಯುವವರು.

dinesh_maneer_Kondadakuli_blog2016-1194

ತನ್ನ ಪಾತ್ರದ ಮೊದಲ ಹಾಡಿನ ಮೊದಲ ತಾಳದ ಪೆಟ್ಟಿನಿಂದ ಕೊನೆಯ ಪೆಟ್ಟಿನ ತನಕ ಲಯ ಬದ್ಧವಾಗಿ, ಪಾತ್ರದ ವ್ಯಕ್ತಿತ್ವಕ್ಕೆ ಪೂರಕವಾಗಿ ಕುಣಿಯುವುದು ಕೊಂಡದಕುಳಿಯವರ  ವೈಶಿಷ್ಟ್ಯ . ಕೃಷ್ಣನ ಶೃಂಗಾರ ಮತ್ತು ನಾಜೂಕು ,ಕಂಸನ ದೌಷ್ಟ್ಯ , ಮಾಗಧನ ಮದ , ಕೌರವನ ಭ್ರಮನಿರಸನ  , ಶಿವನ ರೌದ್ರ, ರಾಮನ ಕಾರುಣ್ಯ ಹೀಗೆ ಪ್ರತಿ ಪಾತ್ರದ ಆತ್ಮವನ್ನು ತನ್ನ ಹೆಜ್ಜೆಗತಿ ಮತ್ತು ರಂಗಸ್ಥಳ ಚಲನೆಯಲ್ಲಿ ಹಿಡಿದಿಡುವ ಕಲಾವಿದರು ಇವರು  . ನಮ್ಮ ತಲೆಮಾರಿನ ಬಡಗು ತಿಟ್ಟಿನ ಕಲಾವಿದರಲ್ಲಿ ಪಾತ್ರದ ಆಳಕ್ಕಿಳಿದು ಚಿತ್ರಣಕ್ಕೆ ಮಹತ್ವ ನೀಡುತ್ತಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಕೊಂಡದಕುಳಿಯವರು ಕೂಡ  ಒಬ್ಬರು. ಒಂದೇ  ಪ್ರಸಂಗದ ನಾಯಕ , ಪ್ರತಿನಾಯಕ , ಪೋಷಕ ಪಾತ್ರ ಎಲ್ಲ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿ ಸೈ  ಎನಿಸಿಕೊಂಡವರು.  ಯಕ್ಷಗಾನ ನೃತ್ಯದಲ್ಲಿ ಚೌಕಟ್ಟನ್ನು ಮೀರದಂತೆ ಹೊಸ ಹೊಸ ಹೆಜ್ಜೆಗಳನ್ನು ಸೇರಿಸುತ್ತಾ ಎಳೆಯ ಕಲಾವಿದರಿಗೆ ಹೊಸ ಸಾಧ್ಯತೆಗಳನ್ನು ತೆರೆಡಿಟ್ಟವರು .  ಪೌರಾಣಿಕ ಪ್ರಸಂಗಗಳನ್ನು  ಪ್ರೀತಿಸುವ ಜನರು   ಮತ್ತೆ  ಹೊಸ ಪ್ರಸಂಗಗಳಿಗೆ ಮರುಳಾಗುವ ಮಂದಿ  ಹೀಗೆ ಎಲ್ಲ  ಬಗೆಯ ಪ್ರೇಕ್ಷಕರಿಂದ ಅಭಿಮಾನ ಅಕ್ಕರೆ ಗಳಿಸಿದವರು . ಮೊದಲು ವ್ಯವಸಾಯಿ ಮೇಳ , ನಂತರ ತಮ್ಮದೇ ಕಾಲಮಿತಿ ಯಕ್ಷಗಾನ ತಂಡ ಇದರ ನಡುವೆ  ಇತರ ತಂಡಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುವಿಕೆ  ಹೀಗೆ ಯಕ್ಷಗಾನ ರಂಗಕ್ಕೆ ಬಂದಾಗಿನಿಂದಲೂ  ಬಹಳ ಬೇಡಿಕೆಯನ್ನು  ಇಟ್ಟುಕೊಂಡವರು  , ಗೌರವವನ್ನು ಪಡೆದವರು .

dinesh_maneer_Kondadakuli_blog2016-2943

ಸಣ್ಣ ವಯಸ್ಸಿನಲ್ಲಿ ಮನೆಯವರ ಕಣ್ಣು ತಪ್ಪಿಸಿ ಗುಡ್ಡೆ ಬದಿ ಓಡಿಹೋಗಿ ಮನಸ್ಸಿನೊಳಗಿನ ಯಕ್ಷಗಾನದ ಹುಚ್ಚನ್ನು ಬಿಚ್ಚಿಡುವಾಗ ಕೊಂಡದಕುಳಿಯವರು ಕಂಡ ಕನಸು ತಾನೊಬ್ಬ ಸಮರ್ಥ ಯಕ್ಷಗಾನ ಕಲಾವಿದನಾಗಬೇಕೆಂದು.  ರಕ್ತಗತವಾದ ಕಲೆ ,ಕಲೆಯ  ಬಗ್ಗಿನ ಅಗಾಧ ಪ್ರೀತಿ ಜೊತೆಗೆ  ಶ್ರದ್ಧೆ ಮತ್ತು ಶಿಸ್ತುಗಳನ್ನು ಮೈಗೂಡಿಸಿಕೊಂಡು ಕಲಾವಿದರಾಗಿ ಬೆಳೆದದ್ದು  ಮತ್ತೆ ಉಳಿದದ್ದು  ಕೊಂಡದಕುಳಿಯವರ ಮಟ್ಟಿಗೆ ಮಾತ್ರ ಅಲ್ಲ ಇಡಿ  ಯಕ್ಷಗಾನ ಲೋಕದ ಮಟ್ಟಿಗೆ ಸಾಕಾರವಾದ ಒಂದು ಸುಂದರ ಕನಸು .

-ಯೋಗಿಂದ್ರ ಮರವಂತೆ

yogindraYogindra Maravanthe writes columns in Kannada web magazine called “Kendasampige”. Some of his articles have also been published in Kannada daily and weekly magazines such as Sudha, Prajavani and Udayavani. Yakshagana is also his interest. He has learnt northern style of yakshagana (Badagu Thittu) from a Yakshagana school in Bangalore and performed in some occasions. By profession he is an Aerospace Engineer working for Airbus in Bristol,United Kingdom. He is born in Maravanthe of Udupi district.


Dinesh Maneer

Photographer. Writer .Trekker.Traveler.Businessman based out of Karnataka, India

All author posts

Privacy Preference Center