ರಾಮನಗರದ endless ಬೆಟ್ಟಗಳ ನಡುವೆ ಅಲೆಯುವುದು ನನ್ನ ಅತೀ ತೃಪ್ತಿಕರ ಛಾಯಾಗ್ರಹಣ hangouts ಗಳಲ್ಲೊಂದು. ಕೆಲವೊಂದು ಸಲ ಯಾರಾದರು ಗೆಳೆಯರ ಜೊತೆಗೆ ಮತ್ತೆ ಕೆಲವೊಂದು ಸಲ ಒಬ್ಬನೇ ಹೋಗಿ ಬಿಡುತ್ತೇನೆ . ಮೊದಮೊದಲು  weather report ಗಳನ್ನೂ , ಸೂರ್ಯ ಹುಟ್ಟುವ ದಿಕ್ಕುಗಳನ್ನು  , ಹೋಗಬೇಕಾದ ಜಾಗಗಳನ್ನು ಅಧ್ಯಯನ ಮಾಡಿ ಹೋಗುತ್ತಿದ್ದೆ. ಆದರೆ ಈಗ ಹಾಗಲ್ಲ . ಅವಕಾಶ ಸಿಕ್ಕಿದರೆ ಸಾಕು ಹೋಗಿಬಿಡುತ್ತೇನೆ. ಡ್ರೈವಿಂಗ್ ಮಾಡುತ್ತಿರುವಾಗಲೇ ಈ ಬೆಟ್ಟ ಆ ಬೆಟ್ಟ ಎಂದು ನಿರ್ಧರಿಸಿ ಅಲ್ಲೇ ಪಕ್ಕದ ಹಳ್ಳಿಯವರ ಹತ್ತಿರ ಮಾತನಾಡಿ ಕಾರು ಹಾಕಿ ಬೆಟ್ಟ ಹತ್ತಿದ್ದುಂಟು . ರಾಮನಗರದ ಬೆಟ್ಟಗಳು ನನಗೆ ಒಂದು ಸೋಜಿಗದ , ಕುತೂಹಲಕಾರಿಯಾದ ಪರಿಸರದ  ವೈಭವ. ಇಲ್ಲಿ ಸಿಗುವ ವಿಷಯಗಳು , ವಿಚಾರಗಳು ಅನಿರೀಕ್ಷಿತ ಮತ್ತು ಬೆರಗುಗೊಲಿಸುವಂತದ್ದು !ಇಲ್ಲಿನ ಜನರ ಪ್ರೀತಿ ಮತ್ತು ಅತಿಥ್ಯ ಅವಿಸ್ಮರಣೀಯ. ಇಲ್ಲಿನ ಗ್ರಾಮೀಣ ಸಂಸ್ಕೃತಿ ಇನ್ನೂ ಕುತೂಹಲಕಾರಿಯಾದದ್ದು.

ಪಾಂಡವರ ಗುಡಿ ಬಯಲು ಎಂಬ ರಾಮನಗರದ ಸ್ಥಳಕ್ಕೆ ತುಂಬಾ ದಿನಗಳಿಂದ ಹೋಗಬೇಕು ಎಂದು ಹಂಬಲಿಸುತ್ತಿದ್ದೆ. ಹೋದ ಜೂನ್ ತಿಂಗಳ weekend ನಲ್ಲಿ ಫೋಟೋಗ್ರಫಿ ಆದರ್ಶಿ ಯಾದ ರಮೇಶ್ ಅಡಕೊಳಿ ಅವರ ಜೊತೆ ಅಲ್ಲಿಗೆ ಹೋಗುವ ಮಹೂರ್ತ ಫಿಕ್ಸ್ ಆಯಿತು. ಭಾನುವಾರ ಬೆಳಿಗ್ಗೆ ಅಲ್ಲಿಗೆ ತಲುಪಿದಾಗ ತುಂತುರು ಮಳೆಯ ಸ್ವಾಗತ.ಅಲ್ಲಿ ಇಲ್ಲಿ ಫೋಟೋ ತೆಗೆಯುತ್ತ , ಹಳ್ಳಿಯವರ ಹತ್ತಿರ ಮಾತನಾಡುತ್ತ ಗುಡಿ ಬಯಲಿನ ದಾರಿ ಹಿಡಿದ್ದಾಗ ಒಂದು ಸಣ್ಣ ಕೆರೆಯೊಂದು ಕಂಡು ನಾವೆಲ್ಲಾ ಫೋಟೋ ತೆಗೆಯುವದರಲ್ಲಿ ಮುಳುಗಿದೆವು. ಅಷ್ಟರಲ್ಲೇ ಒಂದು ಮಹಿಳೆಯರ ತಂಡ ಮಾತನಾಡುತ್ತ , ನಗುತ್ತ ಬರುವುದು ಕೇಳಿಸಿತು. ಆಕಾಶದಲ್ಲಿ ಮಳೆ ಬೆಳಕಿನ ಆಟ ಮತ್ತು ಮಹಿಳೆಯರ ಹಿಂದೆ ರಾಮನಗರದ ಬೆಟ್ಟ ! ನನ್ನ ಕ್ಯಾಮೆರಾವನ್ನು ಹಿಡಿದು ಎದ್ದೋ ಬಿದ್ದೋ ಓಡುತ್ತಾ , ಎಡವುತ್ತಾ ಬಂದು ಆ ತಂಡದ ಫೋಟೋ ತೆಗೆಯುವಾಗ ಅವರೆಲ್ಲ ನನ್ನ ಅವಸ್ಥೆ ನೋಡಿ ನಕ್ಕೇ ಬಿಟ್ಟರು. “ಕಡಲೇಕಾಯಿ ಹೊಲ ನೆಡಲು ಹೊರಟಿದ್ದೇವೆ ಬನ್ನಿ ಅಲ್ಲಿ ಫೋಟೋ ತೆಗೆಯುವಿರಂತೆ “ ಎಂದು ಗಡಿಬಿಡಿಯಲ್ಲಿ ಹೋಗೆ ಬಿಟ್ಟರು. ನಾವು ಇನ್ನು ಸ್ವಲ್ಪ ಫೋಟೋ ತೆಗೆದು ಸಾವಕಾಶವಾಗಿ ಹೊಲವನ್ನು ಹುಡುಕಿಕೊಂಡು ಹೊರೆಟೆವು..

ಸುತ್ತಮುತ್ತಲು ಸ್ವಚ್ಛಂದ ಪರಿಸರ , ಅದರ ಸುತ್ತ ನಮ್ಮನ್ನು ಇಣುಕಿ ನೋಡುತ್ತಿರುವ ಮೂರು ಬೆಟ್ಟಗಳು , ಈಗತಾನೆ ಬಂದ ಮಳೆಯಿಂದ ಆಗಿರುವ ಚಿಕ್ಕ ಚಿಕ್ಕ ನೀರಿನ ಕೊಳ್ಳಗಳು , ಇವೆಲ್ಲರ ನಡುವೆ ನಡೆಯುವ ನನಗೆ ಯಾವುದೊ ಕಾವ್ಯದ ತುಣುಕನ್ನು ಓದಿದ ಅನುಭವ..

 ಹೊನ್ನೇರು ಪೂಜೆ ಉಳುವ ನೇಗಿಲನ್ನು ಪೂಜಿಸಿಯೇ ಮೊದಲ ಬೇಸಾಯ ಆರಂಭಿಸುವ ಒಂದು ಆಚರಣೆ.  ಕೆಲವೊಂದು ಕಡೆ ಹೊನ್ನಾರು ಎಂದೂ  ಕರೆಯುತ್ತಾರೆ. 

ಹೊಲ ಸುಲಭದಲ್ಲಿ ಸಿಕ್ಕಿತು. ಮಹಿಳೆಯರು , ಅವರ ಮಕ್ಕಳು , ಹೊಲದ ಯಜಮಾನ ಎಲ್ಲರು ಹೊನ್ನೇರು ಪೂಜೆಗೆ ಅಣಿಯಾಗಿದ್ದರು. ಮೊದಲನೇ ಮಳೆಗೆ ಹೊಲದ ಕೆಲಸ ಆರಂಭಿಸುವ ಮುನ್ನ ಎತ್ತು ಮತ್ತು ನೇಗಿಲಿಗೆ ಪೂಜೆ ಕೊಟ್ಟು ಪ್ರಸಾದ ಹಂಚುತ್ತಾರೆ . ರಾಮನಗರದ ಜನ ಇದಕ್ಕೆ ಹೊನ್ನೇರು ಪೂಜೆ ಅನ್ನುತ್ತಾರೆ . ಈ ಪೂಜೆ ಕರ್ನಾಟಕದ ಹಲವೆಡೆ ಕಂಡುಬರುತ್ತದೆ. ಉತ್ತರ ಕರ್ನಾಟಕದ ಕಡೆ ಯುಗಾದಿಗೆ ಈ ಪೂಜೆ ಮಾಡುತ್ತಾರೆ . ಒಟ್ಟಿನಲ್ಲಿ ನನಗೆ ಪೂಜೆಯನ್ನು ನೋಡುವ ಮತ್ತು ಮಳೆಯಲ್ಲಿ ಬಿಸಿ ಬಿಸಿ ಚಹಾ ಸವಿಯುವ ಯೋಗ !.

 ಅವರೆಲ್ಲರಿಂದ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡು ಇನ್ನೊಮ್ಮೆ ಇಲ್ಲಿ ಬರುವ ನಿರ್ಧಾರ ಮಾಡಿ ಅವರನ್ನು ಬೀಳ್ಕೊಟ್ಟು ಹೊರಡುವಾಗ ಗಂಟೆ ಹತ್ತೂ ವರೆ . ಹೊಲದ ಯಜಮಾನನ ಸಲಹೆಯಂತೆ ಅಲ್ಲೇ ಪಕ್ಕದಲ್ಲಿ ಇರುವ ಚಿಕ್ಕ ಕೆರೆಯೊಂದನ್ನು ನೋಡಿ ಹೊರಡುವ ಎಂದು ತೀರ್ಮಾನಿಸಿದೆವು.ಕಿರಿದಾದ ದಾರಿಯೊಂದರಲ್ಲಿ ಆಚೆ ಈಚೆ ಗಿಡಗಳನ್ನು ಸವರುತ್ತ ಕೆರೆಗೆ ಬಂದು ಅದನ್ನು ನೋಡಿದಾಗ ಏನೋ ಒಂದು ತರಹದ ಸಂತೋಷ.ಬಹುಶಃ ಈ ವರೆಗಿನ ರಾಮನಗರದ ಕೆರೆಗಳಲ್ಲಿ ಇದೆ ಸುಂದರವಾದದ್ದು ಎಂದೆನಿಸಿತು . ಇದು ವಿಶಾಲವಾದ ಕೆರೆಯೇನಲ್ಲ , ವರ್ಷ ತುಂಬಾ ನೀರೂ ಇರುವ ಲಕ್ಷಣವಿಲ್ಲ . ಅರ್ಧ ಕೆರೆಯನ್ನು ಆಗಲೇ ಹೊಲ ಮಾಡಲಾಗಿದೆ ಆದರೆ ಮಳೆಯ ಕಾರಣ ನೀರು ನಿಂತಿದೆ . ಅಲ್ಲೊಂದು ಮಧ್ಯೆ ಮರ . ಅಲ್ಲಿಯ ವರೆಗೂ ಅಷ್ಟೊಂದು ಕೆಲಸ ಸಿಗದ ಕ್ಯಾಮೆರಾಕ್ಕೆ ಈಗ full ಕೆಲಸ ! 

 ಲ್ಯಾಂಡ್ಸ್ಕೇಪ್ ಫೋಟೋಗ್ರಫಿ ಯಲ್ಲಿ ತಾಳ್ಮೆಯ ಅಗತ್ಯ ತುಂಬಾ ಇದೆ. ಒಂದು ಒಳ್ಳೆಯ ಸ್ಥಳ ಅಥವಾ ಒಳ್ಳೆ ಫೋಟೋ ಬರುವ ಲಕ್ಷಣವಿರುವ ಸನ್ನಿವೇಶ ಸಿಕ್ಕಿತು ಎಂದರೆ ನಮ್ಮ ಮೊದಲು ಆತುರವನ್ನು ನಿಯಂತ್ರಿಸಬೇಕು. ಒಳ್ಳೆಯ ಕಲಾತ್ಮಕ ಚಿತ್ರಕ್ಕೆ ಯಾವುದೇ ಮಿತಿಯಿಲ್ಲ . ಒಳ್ಳೆಯ ಕಲಾತ್ಮಕ ಚಿತ್ರ ಬಣ್ಣ , ಕ್ಯಾಮೆರಾ , ಲೆನ್ಸ್ ಇತ್ಯಾದಿಗಳ ಮೇಲೆ ಅವಲಂಬಿಸಲೇ ಬೇಕಿಲ್ಲ.ತೆಗೆಯುವ ಚಿತ್ರ ಸಂವೇದನಾಶೀಲವಾಗಲು ಒಳ್ಳೆಯ ಸಂಯೋಜನೆಯ ಅವಶ್ಯಕತೆ ತುಂಬಾ ಅಗತ್ಯ ಇದೆ. ಉತ್ತಮ ಅಭ್ಯಾಸ , ಉತ್ತಮ ಕಥೆ ಮತ್ತು ಉತ್ತಮ ಸಂಯೋಜನೆ ಇದ್ದರೆ ಉತ್ತಮ ಚಿತ್ರ , ಅಂದರೆ ನನ್ನ ಹೃದಯಕ್ಕೆ ತಟ್ಟುವ ಚಿತ್ರ ತೆಗೆಯಲು ಸಾದ್ಯ . ಇದನ್ನು ನಾನು ರಾಮನಗರದ ಪರಿಸರದ ಅಭ್ಯಾಸ ಮಾಡುವಾಗ ಮನಗಂಡಿದ್ದೇನೆ. ಇಲ್ಲಿನ ಪರಿಸರ ನನ್ನನ್ನು ಅದೆಷ್ಟೋ ಪಟ್ಟು slowdown ಮಾಡಿದೆ. ಇಂತಹ ಸನ್ನಿವೇಶ ಬಂದರೆ ನಾನು ಅಲ್ಲೇ ಸಾವಕಾಶವಾಗಿ ನಡೆದಾಡುತ್ತೇನೆ. ಅಲ್ಲಿ ಬೆಳೆದಿರುವ ಪ್ರತಿ ಗಿಡ ಬಳ್ಳಿಗಳನ್ನು ನೋಡುತ್ತೇನೆ . ಅಲ್ಲಿರುವ ಪ್ರತಿ ಕಲ್ಲುಗಳನ್ನು, ಮರಗಳನ್ನು ಬೇರೆ ಬೇರೆ ಕೋನದಿಂದ ದೃಷ್ಟಿಸುತ್ತೇನೆ . ಬೀಸುತ್ತಿರುವ ಗಾಳಿಗೋ , ಹನಿಸುತ್ತಿರುವ ಮಳೆಗೋ , ಸುಡುತ್ತಿರುವ ಬಿಸಿಲಿಗೋ ಮೈ ಒಡ್ಡುತ್ತೇನೆ. ಕೆಲವೊಮ್ಮೆ ಅಲ್ಲೇ ಸುಮ್ಮನೆ ಕುಳಿತು ನನ್ನ ಭಾವನೆಗಳನ್ನು ಹರಿಯಬಿಡುತ್ತೇನೆ.ಇವಿಷ್ಟೇ ಸಾಕು ಚಿತ್ರ ತೆಗೆಯಲು inspiration ಗೆ . ಆಗ ಸಿಗುವ ಅನುಭೂತಿಯೇ ಬೇರೆ. ಅಂತಹ ಚಿತ್ರಗಳನ್ನು ನಾನು ಯಾವ ಸಮಯದಲ್ಲಿ ತೆಗೆದು ನೋಡಿದರೂ ರಸಾಸ್ವಾದ ಸುಲಭ. 

ಕೆರೆಯ ಹತ್ತಿರ ತೆಗೆದ ಕೆಲವು ಚಿತ್ರಗಳು ಇಲ್ಲಿವೆ ->